ಅವಳು ಅವನಾದಾಗ

 

         

         ಶೀರ್ಷಿಕೆಯ ಪದಶಃ (ವಾಚ್ಯಾರ್ಥ) ಅರ್ಥವನ್ನಷ್ಟೇ ಅಲ್ಲದೆ ಅದರ ಧ್ವನ್ಯಾರ್ಥ (ಭಾವಾರ್ಥ)  ವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ಹೇಳಿಕೆಯು ಹತ್ತು ಹಲವು ಆಯಾಮಗಳಲ್ಲಿ ತನ್ನ ವ್ಯಾಪಕತೆಯನ್ನು ಹರಡಿಕೊಳ್ಳುತ್ತಾ ತನ್ನ ಸತ್ಯಾರ್ಥವನ್ನು ಸಾರುತ್ತಾ ಸಾಗುತ್ತದೆ. ಅವಳು ಅವನಾದರೂ ಅವಳೀಗ ತಾಯಿ  ಈ ಹೇಳಿಕೆಯನ್ನು ದೈಹಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಹೀಗೆ ಯಾವುದೇ ಆಯಾಮದಿಂದ ನೋಡಿದರೂ ಇದು ಸತ್ಯ ಎನ್ನುವುದು ಶೃತವಾಗುತ್ತದೆ.

          ಇದಕ್ಕೆ ಪುರಾವೆಗಳನ್ನು ಹುಡುಕುತ್ತಾ ಹಿಂದೆ ಸಾಗಿದರೆ ಪುರಾಣಗಳಲ್ಲಿಯೂ ಸಾಕ್ಷ್ಯಗಳು ದೊರೆಯುತ್ತವೆ. ಮಾರ್ಕಂಡೇಯ ಪುರಾಣದ ೧೦೮ನೇ ಅಧ್ಯಾಯದ ಒಂದು ಕಥೆಯಲ್ಲಿ ಮನುವು ಗುರು ವಶಿಷ್ಠರ ಸಲಹೆಯ ಮೇರೆಗೆ ಪುತ್ರ ಫಲಕ್ಕಾಗಿ ಯಜ್ಞವೊಂದನ್ನು ಮಾಡುತ್ತಾನೆ. ಆದರೆ ಯಜ್ಞದ ಫಲವಾಗಿ ಇಲಾ ಎನ್ನುವ ಹೆಣ್ಣು ಮಗುವಿನ ಜನನವಾಗುತ್ತದೆ. ಮಿತ್ರನಾದ ವರುಣ ದೇವರನ್ನು ಸ್ತುತಿಸಿ ಆ ಹೆಣ್ಣು ಮಗುವು ಗಂಡಾಗಿ ಪರಿವರ್ತಿತ ವಾಗುವಂತೆ ವರವನ್ನು ಬೇಡುತ್ತಾನೆ. ವರುಣ ದೇವನ ವರದ ಫಲವಾಗಿ ಇಲಾ ಸುದ್ಯಮ್ನ ಎಂಬ ಪುತ್ರನಾಗಿ ಪರಿವರ್ತಿತನಾಗುತ್ತಾನೆ. ಹರೆಯಕ್ಕೆ ಬಂದ ಸುದ್ಯುಮ್ನ ಶಿವನ ಶಾಪದಿಂದಾಗಿ ಮತ್ತೆ ಹೆಣ್ಣಾಗಿ ಪರಿವರ್ತಿತಳಾಗಿ ಚಂದ್ರ ದೇವನ  ಮಗನಾದ ಬುಧನನ್ನು ಪ್ರೇಮಿಸಿ ಪುರೂರವನೆಂಬ ಪುತ್ರನನ್ನು ಪಡೆಯುತ್ತಾಳೆ. ನಂತರದಲ್ಲಿ ವ್ರತನಿಷ್ಠಳಾಗಿ ಹಲವು ಯಜ್ಞಗಳನ್ನು ಮಾಡಿ ಮತ್ತೆ ತನ್ನ ಪುರುಷ ರೂಪವನ್ನು ವರವಾಗಿ ಪಡೆದು ಸುದ್ಯುಮ್ನನಾಗಿ ದೀರ್ಘ ಕಾಲ ಭೂಮಿಯ ರಾಜನಾಗಿ ಮೂವರು ಮಕ್ಕಳನ್ನು ತನ್ನ ಪತ್ನಿಯರಲ್ಲಿ ಪಡೆಯುತ್ತಾನೆ.

           ಮಹಾಭಾರತದ ಮತ್ತೊಂದು ಉದಾಹರಣೆ ಹೇಳುವುದಾದರೆ ಪುತ್ರ ಕಾಮಿಯಾಗಿ ಯಜ್ಞ ಮಾಡಿದ ದ್ರುಪದ ಮಹಾರಾಜನಿಗೆ ಯಜ್ಞದ ಫಲವಾಗಿ ಶಿಖಂಡಿನಿ ಎಂಬ ಮಗಳು ಜನಿಸುತ್ತಾಳೆ. ಮಹಾಶಿವನ ವರದ ಫಲವಾಗಿ ಶಿಖಂಡಿನಿಯು  ಮುಂದೆ ಯಕ್ಷನೊಬ್ಬನಿಗೆ ತನ್ನ ಸ್ತ್ರೀತ್ವವನ್ನು ನೀಡಿ ಅವನಿಂದ ಪುರುಷತ್ವವನ್ನು ಸ್ವೀಕರಿಸಿ ಶಾಶ್ವತವಾಗಿ ಪುರುಷನಾಗಿ ಮಾರ್ಪಾಡಾದ ಕಥೆ ನೆನಪಿಗೆ ಬರುತ್ತದೆ. ಪುರಾಣದ ಈ ಕಥೆಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸಿದರೆ ಇದೆಲ್ಲಾ ಸಾಧ್ಯವೇ ಎಂದು ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ಕಂಡುಕೊಳ್ಳಬಹುದಾಗಿದೆ.

          ಇತ್ತೀಚೆಗೆ ವಿದೇಶದಲ್ಲಿ ನಡೆದ ಘಟನೆಯಿದು. ಜನ್ಮತಃ ಹೆಣ್ಣಾಗಿ ಜನಿಸಿದ ಹುಡುಗಿಯೊಬ್ಬಳು ಬೆಳೆಯುತ್ತಾ ಹೋದಂತೆ ದೈಹಿಕವಾಗಿ ತಾನು ಹೆಣ್ಣಾದರೂ ಮಾನಸಿಕವಾಗಿ ತಾನೊಂದು ಗಂಡು ಎಂಬ ಸತ್ಯವನ್ನು ಕಂಡುಕೊಂಡಳು. ಹೀಗೆ ಹೆಣ್ಣಿನ ದೇಹದಲ್ಲಿ ಗಂಡಿನ ಮನಸ್ಸನ್ನು ಹೊತ್ತು ಬಹಳ ಕಾಲ ಮುಂದುವರಿಯಲಾಗದೆ ತಾನು ಗಂಡಾಗಿ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ದೃಢ ನಿರ್ಧಾರಕ್ಕೆ ಬಂದಳು. ಶಸ್ತ್ರ ಚಿಕಿತ್ಸೆಯ ಮೂಲಕ ತನ್ನ  ಲಿಂಗವನ್ನು ಪರಿವರ್ತಿಸಿಕೊಂಡು ಇವಾನ್ ಎಂಬ ಪುರುಷನಾಗಿ ಮಾರ್ಪಾಡಾಗಿ ಬಿಟ್ಟಳು. ಇವಾನ್ ಪುರುಷನಾಗಿ ಬಹಳ ಕಾಲ ಕಳೆದ ನಂತರ ಅವನಿಗೆ ತಾನೊಬ್ಬ ಹೆಣ್ಣಾಗಿ ತನ್ನ ಗರ್ಭದಲ್ಲಿ ಮಗುವೊಂದನ್ನು ಹೊತ್ತು ಹೆತ್ತು ತಾಯಿಯಾಗಬೇಕೆಂಬ ಹಂಬಲವಾಯಿತು. ಲಿಂಗ ಪರಿವರ್ತನೆಯ ಸಮಯದಲ್ಲಿ ತನ್ನ ದೇಹದಲ್ಲಿ ಮಕ್ಕಳನ್ನು ಪಡೆಯಲು ಬೇಕಾದ ಅವಯವಗಳನ್ನು ಹಾಗೆಯೇ ಉಳಿಸಿಕೊಂಡಿದ್ದ ಇವಾನ್ ತನ್ನ ವೈದ್ಯರನ್ನು ಸಂಪರ್ಕಿಸಿ ತನ್ನ ಆಸೆಯನ್ನು ಹೇಳಿಕೊಂಡನು.  ಲಿಂಗ ಪರಿವರ್ತಿತ ಗಂಡಾಗಿದ್ದ ಇವಾನ್ ನ  ಈ ಹುಚ್ಚಾಟವನ್ನು ಅವನ ಪೋಷಕರು, ಸ್ನೇಹಿತರು, ನೆರೆಹೊರೆಯವರು ಗೇಲಿ ಮಾಡತೊಡಗಿದರು.  ಆದರೆ ಅವನ ವೈದ್ಯರು ಇದನ್ನು ಸವಾಲಾಗಿ ಸ್ವೀಕರಿಸಿ ಇವಾನ್ ಗೆ ಕೃತಕ ಗರ್ಭಧಾರಣೆಯ (ಐವಿಎಫ್) ಪ್ರಯತ್ನಕ್ಕೆ ಮುಂದಾದರು. ಹಲವು ಪ್ರಯತ್ನಗಳಲ್ಲಿ ಸೋತರಾದರೂ ಇವಾನನಿಗೆ ಗರ್ಭಧಾರಣೆ ಫಲಿಸುವಂತೆ ಮಾಡುವಲ್ಲಿ ಸಫಲರಾದರು. ಇದರಿಂದ ಇವಾನ್ ತಾಯ್ತನದ ಸಂತಸವನ್ನು ಅನುಭವಿಸುವಂತಾಯಿತು. ಹೀಗೆ ಲಿಂಗ ಪರಿವರ್ತನೆ ಮಾಡಿಕೊಂಡು ಪುರುಷನಾಗಿದ್ದ ಹೆಣ್ಣೊಬ್ಬಳು ಪುರುಷನಾಗಿಯೂ ಗರ್ಭ ಧರಿಸಿ ತಾಯಿಯಾದ ಸತ್ಯವನ್ನು ವೈದ್ಯ ವಿಜ್ಞಾನ ಇಂದಿನ ಜಗತ್ತಿಗೆ ಸಾರಿದಂತಾಯಿತು.

           ಹೆಣ್ಣಾಗಿ ಹುಟ್ಟಿ ಪುರುಷತ್ವವನ್ನು ಮೈಗೂಡಿಸಿಕೊಂಡು ಅಬ್ಬರಿಸಿ ಜಗತ್ತಿನ ಚರಿತ್ರೆಯ ಪುಟಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಮಹಿಳೆಯರು ಸಹಸ್ರ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ಪ್ರಪಂಚದಲ್ಲಿ ಬದುಕಿನ ಹಲವಾರು ಅನಿವಾರ್ಯತೆಗಳಿಗೆ ಸಾಧನೆಯ ಹಸಿವಿಗೆ ಪುರುಷ ಪಾತ್ರಧಾರಿಗಳಾಗಿ ಸಾಧನೆಯ ಉತ್ತುಂಗ ಏರಿ ಬದುಕ ಬಂಡಿಯ ನೊಗವನ್ನು ಎಳೆಯುತ್ತಾ ತನ್ನ ಮಕ್ಕಳಿಗೆ, ಸಮಾಜಕ್ಕೆ ತಾಯ್ತನದ ಅಮೃತವನ್ನು ಧಾರೆ ಎರೆಯುತ್ತಿರುವ ಮಹಿಳೆಯರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಇಂದು ಜಗತ್ತಿನ ಯಾವುದೇ ಸಂಕೀರ್ಣ ಔದ್ಯೋಗಿಕ ಕ್ಷೇತ್ರಗಳನ್ನೂ ಬಿಡದೆ ಎಲ್ಲೆಡೆಯೂ ಪುರುಷನಿಗೆ ಸರಿ ಸಮಾನ ಪೈಪೋಟಿ ನೀಡುತ್ತಾ ಸಾಧನೆ ಎಂಬ ಪದವನ್ನು ಲಿಂಗದ ಆಧಾರದಲ್ಲಿ ಅಳೆಯದೇ ಸ್ತ್ರೀಯೂ ಸಕಲವನ್ನೂ ಸಾಧಿಸಿ ತೋರಿಸಬಲ್ಲಳು ಎಂಬ ಸತ್ಯವನ್ನು ಜಗತ್ತಿಗೆ ಸಾರುತ್ತಿದ್ದಾರೆ. ಮಿಲಿಟರಿ, ಸಾಫ್ಟ್ ವೇರ್, ಪೊಲೀಸ್, ವಾಹನಚಾಲನೆ, ಶಿಕ್ಷಣ, ವೈದ್ಯಕೀಯ.... ಹೀಗೆ ಹಲವು ಕ್ಷೇತ್ರ
ಕ್ಷೇತ್ರಗಳಲ್ಲಿ ದುಡಿಯುತ್ತಾ ಸಾವಿರಾರು ಕುಟುಂಬಗಳ ತುತ್ತಿನ ಚೀಲ ತುಂಬುವ ಆಧಾರ ಸ್ತಂಭವಾಗಿದ್ದಾರೆ ಮಹಿಳೆಯರು. ಮಹಿಳೆಯರೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿರುವ ಕಾರಣದಿಂದಾಗಿ ಹಲವಾರು ಕುಟುಂಬಗಳು ಆರ್ಥಿಕ ಪ್ರಗತಿ ಸಾಧಿಸುತ್ತಿವೆ. ಸುಶಿಕ್ಷಿತ ಸ್ತ್ರೀ ತನ್ನ ಮಕ್ಕಳ ಶೈಕ್ಷಣಿಕ ಸಾಧನೆಗೆ ಮಾರ್ಗಸೂಚಿಯಾಗುತ್ತಿದ್ದಾಳೆ. ಎಷ್ಟೋ ಕುಟುಂಬಗಳಲ್ಲಿ ಅಪ್ಪ, ಅಣ್ಣ, ಗಂಡಂದಿರ ಬೇಜವಾಬ್ದಾರಿತನದಿಂದ ನಾಶವಾಗಿ ಹೋಗಬೇಕಿದ್ದ ಮನೆಗಳು ಇಂದು ಮಗಳಾಗಿ, ಅಕ್ಕನಾಗಿ, ತಾಯಿಯಾಗಿ, ಮಹಿಳೆಯು ಜವಾಬ್ದಾರಿತನದಿಂದ ಕುಟುಂಬವನ್ನು ನಿರ್ವಹಣೆ ಮಾಡುತ್ತಿರುವ ಕಾರಣಕ್ಕಾಗಿ ಮನೆಗಳಾಗಿ, ಕುಟುಂಬಗಳಾಗಿ ಉಳಿದುಕೊಂಡಿವೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂಬ ಮಾತನ್ನು ಇಂದು ಲಕ್ಷಾಂತರ ಮಹಿಳೆಯರು ಸತ್ಯವಾಗಿಸಿದ್ದಾರೆ. ಇಂದು ಸಮಾಜದ ವಿವಿಧ ಉನ್ನತ ಸ್ಥಾನಗಳಲ್ಲಿ ಮಹಿಳೆ ಅಲಂಕೃತಳಾಗಿದ್ದಾಳೆ. ಆ ಸ್ಥಾನಗಳ ನಿರ್ವಹಣೆಯಲ್ಲಿ ಪುರುಷರಿಗಿಂತಲೂ ಗಣನೀಯ ಸಾಧನೆ ತೋರುತ್ತಿದ್ದಾಳೆ.  ಆರ್ಥಿಕ ಸ್ವಾವಲಂಬನೆ ಸಾಧಿಸಿಕೊಂಡಿದ್ದಾರೆ.  ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ರಂತಹ ಹೆಣ್ಣುಮಕ್ಕಳು ಗಗನಯಾತ್ರಿಗಳಾಗಿ ಭೂಮಿಯಿಂದಾಚೆಗೂ  ಸ್ತ್ರೀಯರ ಸಾಧನೆಯ ವಿಜಯ ಪತಾಕೆಯನ್ನು ಹಾರಿಸುತ್ತಿದ್ದಾರೆ.

               ಇನ್ನು ವೈಜ್ಞಾನಿಕ ಆಯಾಮವನ್ನು ಹೊರತುಪಡಿಸಿ ಭಾವನಾತ್ಮಕವಾಗಿ ಈ ವಿಷಯವನ್ನು ಚಿಂತಿಸುವುದಾದರೆ ಜಾಗತಿಕ ಮಟ್ಟದಲ್ಲಿ ಹಲವಾರು ಕಾರಣಗಳಿಗೆ ಹಲವಾರು ಕ್ಷೇತ್ರಗಳಲ್ಲಿ ಹೆಣ್ಣು ಗಂಡಾಗಿ ತನ್ನ  ಪ್ರತಿಭೆ ಮೆರೆಯುತ್ತಿದ್ದಾಳೆ. ಆದಾಗ್ಯೂ ತಾಯ್ತನವನ್ನು ಸುಪ್ತವಾಗಿ ತನ್ನೊಳಗಿರಿಸಿಕೊಂಡು ಪೊರೆಯುತ್ತಿದ್ದಾಳೆ.

          ಇಂದಿನ ಪ್ರಪಂಚದ ರಾಜಕೀಯ ಇತಿಹಾಸವನ್ನೊಮ್ಮೆ ಸಿಂಹಾವಲೋಕಿಸಿದರೆ ಭಾರತ, ಈಜಿಪ್ಟ್, ಯುರೋಪ್‌ನ ರಾಜಕೀಯದಲ್ಲಿ ಹಲವಾರು ಮಹಿಳೆಯರು ಪುರುಷರಾಗಿ ಮೆರೆದ ಉದಾಹರಣೆಗಳು ಲಭ್ಯವಾಗುತ್ತವೆ. ರಾಣಿ ವಿಕ್ಟೋರಿಯಾ, ಕ್ಲಿಯೋಪಾತ್ರರಂತಹ ಸ್ತ್ರೀಯರು ಯಾವ ಪುರುಷರಿಗೂ ಕಡಿಮೆ ಎನಿಸದೆ ರಾಜಕೀಯ ಜಾಣ್ಮೆ ಪ್ರದರ್ಶಿಸಿದ್ದಾರೆ. ಇನ್ನು ಸ್ವಾತಂತ್ರ್ಯ ಭಾರತದ ಮೂರನೇ ಪ್ರಧಾನ ಮಂತ್ರಿಯಾಗಿ ಸುದೀರ್ಘ ಆಳ್ವಿಕೆ ನಡೆಸಿದ ಶ್ರೀಮತಿ ಇಂದಿರಾ ಗಾಂಧಿಯವರು ಅಧಿಕಾರದಲ್ಲಿದ್ದಾಗ ಮಾಧ್ಯಮ ವಲಯದಲ್ಲಿ ಒಂದು ಮಾತು ಚಾಲ್ತಿಯಲ್ಲಿ ಹರಿದಾಡುತ್ತಿತ್ತು. ಇಂದಿರಾಜಿ ಅವರ ಕ್ಯಾಬಿನೆಟ್ ನಲ್ಲಿ ಇರುವ ಏಕೈಕ ಪುರುಷ ಮಂತ್ರಿ ಎಂದರೆ ಅದು ಇಂದಿರಾಜಿ ಅವರು ಮಾತ್ರ ಎಂಬುದು. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಮಟ್ಟಿಗಿನ ರಾಜಕೀಯ ಹಿಡಿತ ಸಾಧಿಸಬೇಕಾದಲ್ಲಿ ಇಂದಿರಾ ಅವರು ಮಾನಸಿಕವಾಗಿ ಮೈಗೂಡಿಸಿಕೊಂಡಿದ್ದ ಪುರುಷತ್ವವೇ ಕಾರಣವೆನ್ನಬಹುದು. ಆದಾಗ್ಯೂ ಅವರೊಳಗಿನ ತಾಯ್ತನವನ್ನೇನೂ ಅವರು ಬಲಿ ಕೊಡಲಿಲ್ಲ.  ದೈಹಿಕವಾಗಿ ಇಬ್ಬರು ಗಂಡು ಮಕ್ಕಳ ತಾಯಿಯಾಗಿದ್ದ ಇಂದಿರಾ ಮಾನಸಿಕವಾಗಿ ಕೋಟ್ಯಂತರ ಭಾರತೀಯರ ತಾಯಿಯಾಗಿ ವಾತ್ಸಲ್ಯ ಮೆರೆದರು. ಈ ಪಟ್ಟಿಯಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ದುರ್ಗದ ಓಬವ್ವ ಇವರನ್ನೂ ಸ್ಮರಿಸಬಹುದು. ಇವರು ಸ್ತ್ರೀಯರಾಗಿ ತಮ್ಮ ಮಕ್ಕಳಿಗೆ ಮಾತೃ ಪ್ರೇಮ ಧಾರೆ ಎರೆಯುವುದರ ಜೊತೆಗೆ ರಣಾಂಗಣದಲ್ಲಿ ವೀರ ಪುರುಷ ಸಿಂಹಗಳಂತೆ ಘರ್ಜಿಸಿ ನೂರಾರು ವರ್ಷಗಳ ನಂತರವೂ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದವರು.

           ಇಷ್ಟೆಲ್ಲಾ ಸಾಧಿಸಿದರೂ, ತನ್ನದಲ್ಲದ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಂಡು ಪುರುಷನ ಪಾತ್ರ ವಹಿಸಿದರೂ ಅಂತಿಮವಾಗಿ ಹೆಣ್ಣೊಬ್ಬಳು ಹಂಬಲಿಸುವುದು ತಾಯ್ತನಕ್ಕಾಗಿ. ಹೊರಜಗತ್ತಿನಲ್ಲಿ ಪುರುಷನ ಪಾತ್ರ ವಹಿಸಿ ತನ್ನ ಮನೆಗೆ ಹಿಂದಿರುಗಿದ ಆ ಕ್ಷಣವೇ ಅವಳಲ್ಲಿನ ತಾಯ್ತನ ಜಾಗೃತವಾಗಿಬಿಡುತ್ತದೆ. ಅವಳಲ್ಲಿ ನಿತ್ಯ ಜಾಗೃತವಾಗಿರುವ ಈ ತಾಯ್ತನವೇ ಜಗತ್ತಿನ ಭವಿಷ್ಯತ್ತಿಗೆ ಶ್ರೀರಕ್ಷೆ. ಹಾಗಾಗಿಯೇ ಅವಳು ಗಂಡಾಗಿ ಬದಲಾದರೂ ಈಗ ತಾಯಿ ಎಂಬ ಮಾತು ಅಕ್ಷ ರಶಃ ಸತ್ಯವೆನಿಸುತ್ತದೆ ಈ ಮಾತಿನಲ್ಲಿನ ಅಕ್ಷರಗಳ ಅರ್ಥಕ್ಕಿಂತ ಅವುಗಳ ಧ್ವನಿ ನಮ್ಮನ್ನು ಹೆಚ್ಚು ತಾಕುತ್ತದೆ.

- ಶಶಿಕುಮಾರ್ ಉಪಾಧ್ಯಾಯ.


ಕಾಮೆಂಟ್‌ಗಳು